Karnataka Rajyotsava Celebrations - 2023


ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನೆನೆದವರಿಗೆ ನೆರಳು, ಅಂಧರಿಗೆ ದಾರಿದೀಪ ಅಪ್ಪಿಕೋ ಕನ್ನಡವ. ಚೆಲ್ಲಲಿ ಎಲ್ಲ ಕಡೆ ಕನ್ನಡದ ಕಂಪು ಪ್ರೀತಿಯ ಕಾವ್ಯದ ಇಂಪು. ನ್ಯಾಷನಲ್ ಪಬ್ಲಿಕ್ ಶಾಲೆ, ಹೊಸೂರು ರಸ್ತೆ, ಬೆಂಗಳೂರು, ಹೆಮ್ಮೆಯಿಂದ ಆಚರಿಸಿದ ಅರವತ್ತೆಂಟನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ರಂಗುರಂಗಿನ ವೇದಿಕೆಯಲ್ಲಿ ಅದ್ದೂರಿಯಾಗಿ ಮೂಡಿಬಂದಿತು. ಕನ್ನಡಿಗರ ಪಾಲಿಗೆ ನವೆಂಬರ್ ೧ ಹೆಮ್ಮೆಯ ದಿನ. ಮೈಸೂರು ರಾಜ್ಯವೆಂದು ಕರೆಯಲ್ಪಡುತ್ತಿದ್ದ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ನವೆಂಬರ್ ೧, ೧೯೭೩ ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಹಾಗಾಗಿ ಪ್ರತಿ ವರ್ಷ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ವರ್ಷಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿ ಐವತ್ತು ವರ್ಷಗಳು ಪೂರೈಸಿದೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೂಚನೆ ಮೇರೆಗೆ ನಮ್ಮ ಶಾಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಕವಿಗಳು ರಚಿಸಿರುವ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು , ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ , ಎಲ್ಲಾದರೂ ಇರು ಎಂತಾದರೂ ಇರು , ಒಂದೇ ಒಂದೇ ಕರ್ನಾಟಕ ಒಂದೇ , ಹೊತ್ತಿತೋ ಹೊತ್ತಿತು ಕನ್ನಡದ ದೀಪ ಸೇರಿದಂತೆ ನಮ್ಮ ಹೆಮ್ಮಯ ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಹಾಡಿ ತಾಯಿ ಭುವನೇಶ್ವರಿ ದೇವಿಗೆ ಗೀತನಮನ ಸಲ್ಲಿಸಲಾಯಿತು.

ಕನ್ನಡಿಗನ ಮನದಲ್ಲಿ ಕನ್ನಡ ಪ್ರೇಮವಿರುವವರೆಗೂ ಯಾವ ಭಾಷೆ ಹೇರಿಕೆ ಬಗೆಯೂ ಹೆದರಬೇಕಾಗಿಲ್ಲ. ಕನ್ನಡಕ್ಕಾಗಿ ಎಂಥ ತ್ಯಾಗಕ್ಕಾದರೂ ಸಿದ್ಧರಾಗಿರಬೇಕು. ಕನ್ನಡ ನಮ್ಮ ಕನಸ್ಸು, ಕನ್ನಡ ನಮ್ಮ ಮನಸ್ಸು, ಕನ್ನಡಿಗನೆಂಬ ಹೆಮ್ಮ ಬಲು ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸೋಣ ಎಲ್ಲೆಲ್ಲೂ ಕನ್ನಡದ ಕಂಪನ್ನು ಪಸರಿಸೋಣ.ಕರ್ನಾಟಕಕ್ಕೆ ಮಾತ್ರ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಹಳದಿ ಬಣ್ಣವು ಶಾಂತಿ, ಸೌಹಾರ್ದತೆಯ ಸಂಕೇತವಾದರೆ ಕೆಂಪು ಬಣ್ಣವು ಕ್ರಾಂತಿಯ ಸಂದೇಶವನ್ನು ಸಾರುತ್ತವೆ. ನಮ್ಮ ಕನ್ನಡದ ಬಾವುಟ ಎಲ್ಲೆಡೆ ಪಸರಿಸಲಿ. ಚಿರಕಾಲ ಕನ್ನಡ ಭಾಷೆ ಎಲ್ಲರ ಹೃದಯದಲ್ಲಿ ಗುನುಗುತಿರಲಿ. ಕರ್ನಾಟಕದ ಪ್ರಖ್ಯಾತಿ ದೇಶ ವಿದೇಶಗಳಲ್ಲಿ ಹಬ್ಬಲಿ ಎಂದು ಆಶಿಸುತ್ತಾ ಕನ್ನಡ ನಾಡಿನ ಪ್ರತಿಯೊಬ್ಬ ವೀರ ಕನ್ನಡಿಗರಿಗೂ ೬೮ನೇ “ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ.”